ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ
Delivery Agent : ಆರ್ಡರ್ ಮಾಡಿದ್ದು ತಡವಾದರೆ ಕಂಪೆನಿಗೆ ಕಂಪ್ಲೆಂಟ್ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ. ಆದರೆ ಈ ಗ್ರಾಹಕರು ಮಾತ್ರ ವಿಭಿನ್ನ! ನೋಡಿ ವಿಡಿಯೋ
Viral Video : ಅಡುಗೆ ಮಾಡಲು ಸಮಯವಿಲ್ಲವೆಂದೋ, ಉದಾಸೀನವೆಂದೋ ಅಥವಾ ಇನ್ನೇನೋ ಕಾರಣಕ್ಕೆ ಫುಡ್ ಆರ್ಡರ್ ಮಾಡುತ್ತೀರಿ. ಆದರೆ ಕಾರಣಾಂತರದಿಂದ ಡೆಲಿವರಿ ಏಜೆಂಟ್ ತಡವಾಗಿ ನಿಮ್ಮನ್ನು ತಲುಪುತ್ತಾರೆ. ಆಗ ಏನು ಮಾಡುತ್ತೀರಿ? ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ ಅಥವಾ ತಡವಾಗಿದ್ದಕ್ಕೆ ಕಂಪೆನಿಗೆ ಕಂಪ್ಲೆಂಟ್ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಇದೆಲ್ಲವೂ ಮಾಮೂಲು. ಆದರೆ ಆ ವಿಳಂಬಕ್ಷಣಗಳನ್ನು ಸಂತಸಕ್ಕೆ ತಿರುಗಿಸಿಕೊಳ್ಳುವ ಹಾಗೆ ಎಂದಾದರೂ ಯೋಚಿಸಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ. ಸಂಜೀವ್ ತ್ಯಾಗಿ ಎನ್ನುವ ಇನ್ಸ್ಟಾಗ್ರಾಂ ಖಾತೆದಾರರು ದಸರಾ ದಿನದಂದು ಹಲ್ದೀರಾಮ್ಸ್ನಿಂದ ಚೋಲೆ ಭಟುರೆ ಆರ್ಡರ್ ಮಾಡಿದ್ದರು. ಏಜೆಂಟ್ ಒಂದು ಗಂಟೆ ತಡವಾಗಿ ಬಂದರು ಮುಂದೇನಾಯಿತು ನೋಡಿ.
View this post on Instagram
ನಗು ಬರುತ್ತಿದೆಯಲ್ಲ? ದೆಹಲಿಯ ಟ್ರಾಫಿಕ್ ಜಾಮ್ನಿಂದ ಒಂದು ಗಂಟೆ ತಡವಾಗಿ ಬಂದ ಡೆಲಿವರಿ ಏಜೆಂಟ್ ಇಂಥ ಸರ್ಪ್ರೈಝ್ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ‘ಆಯಿಯೇ ಆಪಕಾ ಇಂತಜಾರ ಥಾ’ ಎಂದು ಹಾಡುತ್ತ ಡೆಲಿವರಿ ಏಜೆಂಟ್ಗೆ ಸಂಜೀವ್ ತಿಲಕ ಹಚ್ಚಿ ಸ್ವಾಗತಿಸಿದ್ದಾರೆ. ತಡವಾಗಿದ್ದಕ್ಕೆ ಬೈಗುಳ ತಿನ್ನಬೇಕಲ್ಲ ಎಂದುಕೊಂಡು ಬಂದಿದ್ದ ಏಜೆಂಟ್ ನಸುನಗುತ್ತ ಆರತಿ ಮಾಡಿಸಿಕೊಂಡು ವಾಪಾಸಾಗಿದ್ದಾರೆ.
ಈ ವಿಡಿಯೋ ಅನ್ನು ಮೂರು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಪ್ರತಿಕ್ರಿಯೆಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ಬಹಳ ಖುಷಿ ಕೊಡುತ್ತದೆ ಈ ವಿಡಿಯೋ ಎಂದು ಕೆಲವರು, ಈ ಕಾಯುವಿಕೆ ಮತ್ತು ತಡ ಎನ್ನುವ ಸನ್ನಿವೇಶವನ್ನು ಹೀಗೆ ಸಂತಸದಿಂದ ಮಾರ್ಪಾಡಿಸಿಕೊಂಡ ಸಂಜೀವ್ ಅವರಿಗೆ ಅಭಿನಂದನೆ ಎಂದಿದ್ದಾರೆ ಹಲವರು.
ಹೇಗಿದೆ ಈ ಐಡಿಯಾ? ಕೋಪ, ಬೇಜಾರು, ಅದು ಇದು ಎಲ್ಲ ಇದ್ದದ್ದೇ. ಒಮ್ಮೆ ಭಿನ್ನವಾಗಿ ಆಲೋಚಿಸುವುದನ್ನು ಕಲಿತರೆ ಎಲ್ಲವೂ ತಿಳಿಯಾಗಿ ಸುಂದರವಾದ ನೆನಪಾಗಿ ದಾಖಲಾಗುವುದಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:04 pm, Sat, 8 October 22